ಬುಧ
ಸೂರ್ಯನಿಗೆ ಅತ್ಯಂತ ಸಮೀಪವಾಗಿರುವ ಗ್ರಹ (ಮಕ್ರ್ಯುರಿ). ಪ್ಲೂಟೋಗ್ರಹವನ್ನು ಬಿಟ್ಟರೆ ಉಳಿದ ಗ್ರಹಗಳ ಪೈಕಿ ಇದೇ ಅತ್ಯಂತ ಚಿಕ್ಕದು. ಸೌರವ್ಯೂಹದ ಗ್ರಹಗಳ ವರ್ಗೀಕರಣ ರೀತ್ಯ, ಒಳಗ್ರಹಗಳ (ಇನ್ನರ್ ಪ್ಲ್ಯಾನೆಟ್ಸ್) ಪೈಕಿ ಮೊದಲನೆಯದು. ಉಳಿದವು ಶುಕ್ರ, ಭೂಮಿ ಮತ್ತು ಮಂಗಳ. ಭೂಕಕ್ಷೆಯ ಒಳಗೇ ಇದರ ಕಕ್ಷೆ ಇರುವುದರಿಂದ ಇದನ್ನು ನೀಚಗ್ರಹವೆಂದೂ (ಇನ್‍ಫೀರಿಯರ್ ಪ್ಲಾನೆಟ್) ಕರೆಯುವುದಿದೆ. ಚಂದ್ರನಿಗೆ ಇರುವಂತೆಯೇ ಈ ಗ್ರಹಕ್ಕೂ ವಿವಿಧ ಕಲೆಗಳು (ಫೇಸಸ್) ಉಂಟು. ಇವನ್ನು ಮೊದಲಿಗೆ (17ನೆಯ ಶತಮಾನದ ಪೂರ್ವಾರ್ಧ) ಹೀವೀಲಿಯಸ್ ಎಂಬವ ಪತ್ತೆಮಾಡಿದ್ದ. ಪೂರ್ಣಬುಧ (ಫುಲ್ ಮಕ್ರ್ಯುರಿ) ಗೋಚರಿಸುವುದು ಗ್ರಹ ತನ್ನ ಕಕ್ಷೆಯ ಉಚ್ಚಯುತಿಯಲ್ಲಿ (ಸುಪೀರಿಯರ್ ಕಂಜಂಕ್ಷನ್) ಇದ್ದಾಗ. ಚತುರ್ಥಪಾದದ ಕಲೆ ಬರುವುದು ಅತ್ಯಧಿಕ ಕೋನಾಂತರದಲ್ಲಿ. ನೀಚಯುತಿಯಲ್ಲಿ (ಇನ್‍ಫೀರಿಯರ್ ಕಂಜಂಕ್ಷನ್) ಕ್ಷಯ ಕಲೆ (ನ್ಯೂ ಮಕ್ರ್ಯುರಿ). ಎರಡು ಕ್ರಮಾಗತ ಪೂರ್ಣಬುಧಕಲೆಗಳ ನಡುವಣ ಅವಧಿ 115.88 ದಿವಸಗಳು. ಹಗಲು ಹೊತ್ತಿನಲ್ಲಿ ಯುಕ್ತ ಹಾಗೂ ಸಮರ್ಥ ದೂರದರ್ಶಕಗಳನ್ನು ಬಳಸಿ, ಉನ್ನತ ಸ್ಥಳಗಳಿಂದ ವೀಕ್ಷಿಸಿದರೆ, ಚಂದ್ರನ ಮೇಲ್ಮೈಯಲ್ಲಿಯಂತೆ ಬುಧದ ಮೈಯಲ್ಲಿ ಕೂಡ ಕುಳಿಗಳು ಮತ್ತು ವಿಶಾಲ ವರ್ತುಳೀಯ ಪ್ರದೇಶಗಳು ಗೋಚರಿಸುತ್ತವೆ. ಗ್ರಹದರ್ಶನ ಶುಕ್ರಗ್ರಹದಂತೆ-ಸೂರ್ಯೋದಯ ಪೂರ್ವದಲ್ಲಿ ಪೂರ್ವಾಕಾಶದಲ್ಲಿ ಕೊಂಚ ಹೊತ್ತು ಇಲ್ಲವೇ ಸೂರ್ಯಸ್ತಮಾನಾಂತರ ಪಶ್ಚಿಮಾಕಾಶದಲ್ಲಿ ಕೊಂಚಹೊತ್ತು. ಬುಧ ಸೂರ್ಯನನ್ನು ಅಡ್ಡಹಾಯುವ ದೃಶ್ಯ ಅತಿ ವಿರಳವಾಗಿ ಕಾಣುತ್ತದೆ. ಇದು ಬುಧ ಸಂಕ್ರಮಣ (ಟ್ರಾನ್ಸಿಟ್ ಆಫ್ ಮಕ್ರ್ಯುರಿ). ಜರ್ಮನಿಯ ಖಗೋಳ ವಿಜ್ಞಾನಿ ಯೋಹಾನ್ ಕೆಪ್ಲರ್ (1571-1630) 1631 ನವೆಂಬರ್ 7 ರಂದು ಜರಗಲಿದ್ದ ಬುಧ ಸಂಕ್ರಮಣದ ಬಗ್ಗೆ ಮುನ್ನುಡಿದಿದ್ದ. ಅದು ವಾಸ್ತವಾಗಿ ಘಟಿಸಿದಾಗ ಕೆಪ್ಲರ್ ಇರಲಿಲ್ಲ. ಆದರೆ ಗ್ಯಾಸೆಂಡಿ ಎಂಬವ ಇದನ್ನು ವೀಕ್ಷಿಸಿದ. 1631ರಿಂದ 1973ರ ನಡುವಿನ ಅವಧಿಯಲ್ಲಿ 46 ಬುಧ ಸಂಕ್ರಮಣಗಳು ಸಂಭವಿಸಿವೆ. ಸಾಧಾರಣವಾಗಿ ಶತಮಾನವೊಂದರಲ್ಲಿ 13 ಸಂಕ್ರಮಣಗಳು ನಡೆಯುತ್ತವೆ.

1986 ನವೆಂಬರ್ 10, 1993 ನವೆಂಬರ್ 6 ಮತ್ತು 1999 ನವರಂಬರ್ 15. ಭೂಕಕ್ಷಾತಲವನ್ನು ಬುಧ ಕಕ್ಷಾತಲ ಛೇದಿಸುವ ಸಂದರ್ಭಗಳು (ಮೇ 7 ಮತ್ತು ನವೆಂಬರ್ 9ರ ಆಸುಪಾಸು) ಬುಧಸಂಕ್ರಮಣದ ಸಂದರ್ಭಗಳು. 

	       ಗ್ರಹವನ್ನು ಕುರಿತ ಕೆಲವು ವಿವರಗಳು
ಸೂರ್ಯನಿಂದ ಸರಾಸರಿ ದೂರ    		---   57.9 ಮಿಲಿಯನ್ ಕಿಮೀ
ಸೂರ್ಯನಿಂದ ಗರಿಷ್ಠ ದೂರ    		---   69.7 ಮಿಲಿಯನ್ ಕಿಮೀ
ಸೂರ್ಯನಿಂದ ಕನಿಷ್ಠ ದೂರ     		---   45.9 ಮಿಲಿಯನ್ ಕಿಮೀ
ನಾಕ್ಷತ್ರಿಕ ಅವಧಿ         	     		---   87,969 ದಿವಸಗಳು
ಆವರ್ತನಾವಧಿ               		---    58,6461 ದಿವಸಗಳು
ಸರಾಸರಿ ಕಕ್ಷಾವೇಗ           		---    47.87 ಕಿಮೀ/ಸೆ
ಕಕ್ಷಾತಲದ ಬಾಗು             		---    ಅತ್ಯಲ್ಪ
ಕಕ್ಷೆಯ ಉತ್ಕೇಂದ್ರತೆ         		---    0.206
ಗ್ರಹವ್ಯಾಸ                 		---    4880 ಕಿಮೀ
ಭೂಮಿಯಿಂದ ತೋರ್ಕೆ ಕೋನ ವ್ಯಾಸ   	---   12 .9(ಗರಿಷ್ಟ) 4 .5 (ಕನಿಷ್ಟ)
ವ್ಯುತ್ಕ್ರಮ ರಾಶಿ, ಸೂರ್ಯ     			---    1 : 6,000,000
ಸಾಂದ್ರತೆ (ನೀರು=1)         			---    1 : 5.5
ರಾಶಿ (ಭೂಮಿ=1)          			---  1 : 0.055
ವಿಮೋಚನೆ ವೇಗ          			---  4.3 ಕಿಮೀ/ಸೆ
ಮೇಲ್ಮೈ ಸಾಂದ್ರತೆ (ಭೂಮಿ=1)     	---  1 : 1.16
ಸರಾಸರಿ ಮೇಲ್ಮೈ ಉಷ್ಣತೆ       			---  + 350  (ಹಗಲು);-170 (ಇರುಳು)
ಆಲ್ಬೆಡೋ            			---  0.06
ಗರಿಷ್ಟ ಕಾಂತಿಮಾನ        			---  -1.9

      ದೂರದರ್ಶಕೀಯ ವೀಕ್ಷಣೆಗಳಿಂದ ಗ್ರಹದ ನಾಕ್ಷತ್ರಿಕ ಅವಧಿ ಸನ್ನಿಹಿತವಾಗಿ 88 ದಿವಸಗಳೆಂದು ಎಣಿಸಿದ್ದರೂ ರೇಡಾರ್ ಉಪಕರಣ ಬಳಸಿ ಈ ಮೌಲ್ಯ 59 ದಿವಸಗಳೆಂದು ನಿಗದಿಯಾಗಿದೆ.

      18ನೆಯ ಶತಮಾನದಲ್ಲಿ ವಿಲಿಯಮ್ ಹರ್ಷಲ್ (1738-1822) ಎಂಬ ಖಗೋಳ ವಿಜ್ಞಾನಿ ಗ್ರಹವನ್ನು ದೂರದರ್ಶಕದ ಮೂಲಕ ವೀಕ್ಷಿಸಿದ್ದ. ಆದರೆ ಅದರ ಮೇಲ್ಮೈ ಕುರಿತ ವಿವರ ತಿಳಿಯಲಾಗಲಿಲ್ಲ. ಮುಂದೆ ಜೆ.ಎಚ್.ಷ್ರೋಟರ್ ಎಂಬವ ಅದರ ಮೇಲ್ಮೈ ಕಲೆಗಳನ್ನು ಗುರುತಿಸಿ ಅವು ಪರ್ವತಗಳಿರಬಹುದೆಂದು ಶಂಕಿಸಿದ. ಮಿಲಾನ್ ನಗರದ ಜಿ.ವಿ. ಷಿಯಾಪರೇಲಿ ಎಂಬವ 1881-89 ಅವಧಿಯಲ್ಲಿ ವಕ್ರೀಕರಣ ಮಾದರಿಯ ದೂರದರ್ಶಕ ಬಳಸಿ, ಅನೇಕ ಕಪ್ಪನೆಯ ಗುರುತುಗಳನ್ನು ಗ್ರಹದ ಮೇಲ್ಮೈಯಲ್ಲಿ ಕಂಡ. ಈ ವೀಕ್ಷಣೆಗಳಿಂದ ಗ್ರಹದ ಆವರ್ತನಾವಧಿ ಮತ್ತು ಪರಿಭ್ರಮಣಾವಧಿಗಳು ಒಂದೇ ಎಂಬುದಾಗಿ ಆತ ತರ್ಕಿಸಿದ. ನಡುಹಗಲಿನಲ್ಲಿ, ಹಾರಿಜದ ಬಲು ಎತ್ತರಕ್ಕೆ ಗ್ರಹ ಮತ್ತು ಸೂರ್ಯ ಇದ್ದಾಗ ಗ್ರಹವನ್ನು ವೀಕ್ಷಿಸಿದವರ ಪೈಕಿ ಷಿಯಾಪರೇಲಿ ಒಬ್ಬ. ಗ್ರಹದ ಮೇಲ್ಮೈ ವಿವರಗಳಿರುವ ಪಟವನ್ನು ಇ.ಎಂ. ಆಂಟೋನಿಯಾಡಿ ಎಂಬವ ರಚಿಸಿದ. ಇದು 1934ರಲ್ಲಿ ಪ್ರಕಟ ವಾಯಿತು. ಷಿಯಾಪರೇಲಿ ಭಾವಿಸಿದ್ದ ಪರಿಯಲ್ಲೇ ಗ್ರಹದ ಎರಡು ಅವಧಿಗಳೂ ಒಂದೇ ಎಂಬುದು ಆಂಟೋನಿಯಾಡಿ ಕೂಡ ಭಾವಿಸಿದ್ದುಂಟು. ಆದರೆ ಇವೆಲ್ಲ ತಪ್ಪು ಎಂದು ತರುವಾಯದ ವೀಕ್ಷಣೆ ಗಣನೆಗಳಿಂದ ಸ್ಥಿರಪಟ್ಟವು. 

       ಬುಧಗ್ರಹದ ಮೇಲೆ ಅತ್ಯಧಿಕ ಉಷ್ಣತೆಯ ಎರಡು ಪ್ರದೇಶಗಳಿವೆ. ಇವಕ್ಕೆ ಉಷ್ಣಧ್ರುವಗಳೆಂದು (ಹಾಟ್ ಪೋಲ್ಸ್) ಹೆಸರು. ಇವುಗಳ ಪೈಕಿ ಒಂದಾದ ಕ್ಯಾಲೊರಿಸ್ ಬೇಸಿನ್ ಪ್ರದೇಶದ ವ್ಯಾಸ 1300ಕಿಮೀ. ಇದನ್ನು ಸುಮಾರು 2 ಕಿಮೀ ಎತ್ತರದ ನಯಪರ್ವತಗೋಡೆ ಸುತ್ತುವರಿದಿದೆ. ಈ ಪ್ರದೇಶದ ಅರ್ಧದಷ್ಟರ ಬಗ್ಗೆ ಮಾಹಿತಿಯನ್ನು ಗ್ರಹಾನ್ವೇಷಣೆಗೆಂದು ಅಮೆರಿಕ ಉಡಾಯಿಸಿದ ಆಕಾಶ ನೌಕೆ ಮ್ಯಾರಿನರ್ 10 ಒದಗಿಸಿಕೊಟ್ಟಿದೆ. ಬುಧಗ್ರಹದ ವ್ಯಾಸ ಚಾಂದ್ರ ವ್ಯಾಸದ 1.3 ರಷ್ಟು; ರಾಶಿ ಚಾಂದ್ರರಾಶಿಯ 4.2ರಷ್ಟು. ಮೇಲ್ಮೈಸಾಂದ್ರತೆ ಚಾಂದ್ರ ಮೇಲ್ಮೈಸಾಂದ್ರತೆ 2.1 ರಷ್ಟು; ವಿಮೋಚನವೇಗ ಚಂದ್ರನದಕ್ಕಿಂತ ತೀರ ಕಡಿಮೆ. ಬುಧಗ್ರಹದ ಮೇಲ್ಮೈ ಉಷ್ಣತೆ ಅತ್ಯಂತ ಅಧಿಕವಾಗಿರುವ ಕಾರಣ ಅಲ್ಲಿ ಯಾವುದೇ ಬಗೆಯ ಜೀವಿ ಇರಲು ಸಾಧ್ಯವಿಲ್ಲ. 

       ಸೂರ್ಯನನ್ನು ಬುಧ ದೀರ್ಘವೃತ್ತಕಕ್ಷೆಯಲ್ಲಿ ಪರಿಭ್ರಮಿಸುತ್ತಿದೆ. ಸೂರ್ಯ ಇದರ ಒಂದು ನಾಭಿಯಲ್ಲಿದೆ. ಈ ಪರಿಭಮ್ರಣೆ ಕುರಿತಂತೆ 19ನೆಯ ಶತಮಾನದಲ್ಲಿ ವಿಚಾರ ಮಂಥನ ನಡೆದು, ಗ್ರಹ ಚಲನೆಯ ಕ್ರಮದಲ್ಲಿ ಇಲ್ಲವೇ ಲೆಕ್ಕಾಚಾರದಲ್ಲಿ ದೋಷ ನುಸುಳಿರುವುದು ಗೊತ್ತಾಯಿತು. ನ್ಯೂಟನ್ನನ ಗುರುತ್ವನಿಯಮದ ಅನ್ವಯ, ಇತರ ಎಲ್ಲ ಗ್ರಹಗಳ ಸಂಯುಕ್ತ ಪ್ರಭಾವವನ್ನು ಗಣನೆಗೆ ತೆಗೆದುಕೊಂಡ ಬಳಿಕವೂ ಈ ದೋಷಕ್ಕೆ ಕಾರಣ ತಿಳಿಯಲಿಲ್ಲ. ಬುಧಕಕ್ಷೆ ಅಯನಿಸುತ್ತಿತ್ತು. ಗ್ರಹದ ಇಡೀ ಕಕ್ಷೆಯೇ ಸೂರ್ಯ ಇದರ ನಾಭಿಯಲ್ಲಿರುವಂತೆಯೇ, ಕ್ರಮೇಣ ಸೂರ್ಯನ ಸುತ್ತ ಪರಿಭ್ರಮಿಸುವುದೇ ಗ್ರಹ ಕಕ್ಷೆಯ ಅಯನ. ಇದರ ಪರಿಣಾಮ ಅತ್ಯಲ್ಪ. ಶತಮಾನದ ಅವಧಿಯಲ್ಲಿ ಪುರರವಿಬಿಂದು (ಪೆರಿಹೀಲಿಯನ್) 43 ಸೆಕೆಂಡುಗಳ ಚಾಪವನ್ನು ರೇಖಿಸುತ್ತಿತ್ತು. 

       ನ್ಯೂಟನ್ ಬಲವಿಜ್ಞಾನದ ಮಿತಿಯಲ್ಲಿ ವಿವರಿಸಲಾಗದ ಈ ವಿಚಲನೆಗೆ ಆಲ್ಬರ್ಟ್ ಐನ್‍ಸ್ಟೈನ್ (1879-1955) ಮಂಡಿಸಿದ ಸಾರ್ವತ್ರಿಕ ಸಾಪೇಕ್ಷತಾ ಸಿದ್ಧಾಂತದಲ್ಲಿ ಸಮರ್ಪಕ ವಿವರಣೆ ಒದಗಿತು. ಈ ಸಿದ್ಧಾಂತ ರೀತ್ಯ. ಯಾವುದೇ ನಕ್ಷತ್ರ ತನ್ನ ಗುರುತ್ವ ಕ್ಷೇತ್ರದಲ್ಲಿ ಆಕಾಶ ಮತ್ತು ಕಾಲದ ಚೌಕಟ್ಟನ್ನು ವಕ್ರಿಸುತ್ತದೆ. ಸೂರ್ಯನ ಈ ಪ್ರಭಾವದ ಕಾರಣವಾಗಿ ಬುಧ ಕಕ್ಷೆಯ ಪುರರವಿ ವೀಕ್ಷಣೆ ಶ್ರುತ ಪಡಿಸಿದ ಪ್ರಕಾರ ಆಯನಿಸುತ್ತದೆ ಎಂಬುದು ಸ್ಥಿರಪಟ್ಟಿತು.   	
		   	 
ಶುಕ್ರ, ಬುಧ ಮತ್ತು ಸೂರ್ಯನ ಅನ್ವೇಷಣೆಗಾಗಿ ಅಮೇರಿಕಾ ಸಂಯುಕ್ತ ಸಂಸ್ಥಾನ 1973 ನವೆಂಬರ 2 ರಂದು ಮ್ಯಾರಿನರ್ 10 ಎಂಬ ಹೆಸರಿನ ಆಕಾಶ ನೌಕೆಯನ್ನು ಉಡಾಯಿಸಿತು. 1974 ಮಾರ್ಚ್ ತಿಂಗಳ ಅಂತ್ಯದ ವೇಳೆಗೆ ಈ ನೌಕೆ ಬುಧ ಗ್ರಹದ ಸಮೀಪ ಹಾದು ಹೋಗಿ, ಗ್ರಹದ ಮೇಲ್ಮೈ ವಿವರಗಳನ್ನು ಕುರಿತ 2400 ಛಾಯಾಚಿತ್ರಗಳನ್ನು ತೆಗೆದು ಭೂಮಿಗೆ ರವಾನಿಸಿತು. 1974 ಸೆಪ್ಟೆಂಬರ್ 21 ರಂದು ಪುನಃ ಬುಧ ಗ್ರಹ ಸಮೀಪಕ್ಕೆ ಬಂತು. ಮತ್ತೆ ಮೂರನೆಯ ಸಲವು (1975 ಮಾರ್ಚ್ 6) ತನ್ನ ನಿಯೋಜಿತ ಕಾರ್ಯವನ್ನು ನಡೆಸಿತು. ಮ್ಯಾರಿನರ್ ಶೋಧನೆಯಿಂದ ಲಭ್ಯವಾಗಿರುವ ಸ್ಥೂಲ ಮಾಹಿತಿಗಳ ಪ್ರಕಾರ ಬುಧಗ್ರಹಕ್ಕೆ ಹೇಳಿಕೊಳ್ಳುವ ಯಾವುದೇ ವಾತಾವರಣ ಇಲ್ಲ. ಗ್ರಹನೆಲದ ಮೇಲಿನ ಒತ್ತಡ ಸುಮಾರು 10-9 ಮಿಲಿಬಾರುಗಳು. ಬುಧ ಭೂಮಿಯಂತೆಯೇ ಅಧಿಕ ಸಾಂದ್ರವಾದ್ದು. ಗ್ರಹದ ಸಾಪೇಕ್ಷ ಸಾಂದ್ರತೆ 5.5 ದ್ರವರೂಪದಲ್ಲಿರುವ ಮತ್ತು ಕಬ್ಬಿಣದ ಅಂಶವೇ ಹೆಚ್ಚಾಗಿರುವ ಒಳತಿರುಳನ್ನು ಹೊಂದಿದೆ. ತಿರುಳಿನ ವ್ಯಾಸ 3600 ಕಿಮೀ. ಗ್ರಹರಾಶಿಯ ಶೇಕಡ್ 80 ಭಾಗ ಈ ತಿರುಳಿನದೇ. ಗ್ರಹದ ಕಾಂತಕ್ಷೇತ್ರ ದ್ವಿಧ್ರುವೀಯವಾಗಿದ್ದು ಶುಕ್ರ, ಮಂಗಳ ಇಲ್ಲವೆ ಚಂದ್ರನದಕ್ಕಿಂತ ಬಹುಪಾಲು ಅಧಿಕವಾಗಿದೆ. ಗ್ರಹದ ಮೇಲ್ಮೈ ಸಮತಟ್ಟುಪ್ರದೇಶ, ಪರ್ವತ, ಕಣಿವೆ, ಬೆಟ್ಟದ ಬೆನ್ನೇಣು ಮತ್ತು ತುಂಡುತುಣುಕುಗಳಿಂದ ಕೂಡಿದೆ. ಚಂದ್ರನ ಮೇಲ್ಮೈಗೂ ಬುಧನ ಮೇಲ್ಮೈಗೂ ಬಹಳಷ್ಟು ಸಾಮ್ಯ ಉಂಟು. ಚಾಂದ್ರಕುಳಿಗಳನ್ನು ಹೋಲುವ ಕುಳಿಗಳು ಇಲ್ಲೂ ಇವೆ. ಕಿರಣವನ್ನು ಹೊರಸೊಸುವಂತಿರುವ ಕುಳಿಗಳೂ (ರೇ ಕ್ರೇಟರ್ಸ್) ಕುಳಿಪಂಕ್ತಿಗಳೂ ಇವೆ. ಚಾವೋ ಮಂಗ್ ಫೂ ಎಂಬ ಹೆಸರಿನ ಕುಳಿಯ ಒಳಭಾಗದಲ್ಲಿ ಗ್ರಹದ ದಕ್ಷಿಣ ಧ್ರುವ ಇದೆ. 20 ಯ ಯಾಮ್ಯೋತ್ತರ ರೇಖೆ 1.5 ಕಿ.ಮೀ ಗಳಷ್ಟು ಅಗಲವಿರುವ ಹನ್‍ಕಾಲ್ ಎಂಬ ಹೆಸರಿನ ಕುಳಿಯ ಕೇಂದ್ರದ ಮೂಲಕ ಸಾಗುತ್ತದೆ. ಒಂದು ಪಾಶ್ರ್ವದಲ್ಲಿ ಇನ್ನೊಂದು ಪಾಶ್ರ್ವಕ್ಕಿಂತ ಹೆಚ್ಚು ಕುಳಿಗಳಿವೆ. ಮ್ಯಾರಿನರ್ ನೌಕೆ ಅಂದಾಜು ಮಾಡಿದಂತೆ, ಹಗಲಿನ ವೇಳೆ ಉಷ್ಣತೆ 710. ಗ್ರಹದ ಮೇಲಿನ ಕಣಿವೆಗಳಿಗೆ ಕೆಲವೊಂದು ರೇಡಿಯೊ ದೂರದರ್ಶಕಗಳ ಹೆಸರುಗಳನ್ನೂ ಬೆಟ್ಟದ ಬೆನ್ನೇಣುಗಳಿಗೆ ಕೆಲವೊಂದು ಖಗೋಳವಿಜ್ಞಾನಿಗಳ ಹೆಸರುಗಳನ್ನೂ ಪ್ರಪಾತಗಳಿಗೆ ಅನ್ವೇಷಣಾ ನೌಕೆಗಳ ಹೆಸರುಗಳನ್ನೂ ಇಡಲಾಗಿದೆ. 
	(ಆರ್.ಆರ್.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ